ಚಾಂಗ್‍ಷಾ-
ಚೀನದ ಒಂದು ನಗರ, ಹೂನಾನ್ ಪ್ರಾಂತ್ಯದ ಮುಖ್ಯ ಪಟ್ಟಣ. ಷಿಯಾಂಗ್ ನದಿಯ ಪೂರ್ವದ ದಂಡೆಯ ಮೇಲೆ ಉ.ಅ. 28 12 ಮತ್ತು ಪೂ.ರೇ. 112 59 ರಲ್ಲಿದೆ. ಜನಸಂಖ್ಯೆ ಸುಮಾರು 7.1 ಲಕ್ಷ (1958). ಮಧ್ಯ ಯಾಂಗ್ಸ್ ಟೀ ಕಣಿವೆಯ ಮಹಾದ್ವಾರದಂತಿರುವುದರಿಂದ ಹಿಂದಿನಿಂದಲೂ ಇದರ ಪ್ರಾಶಸ್ತ್ಯ. ಯಾಂಗ್ಸ್‍ಟೀ ನದಿಯಲ್ಲಿ ಉಗಿ ಜಹಜುಗಳು ಇಲ್ಲಿಯವರೆಗೂ ಸಂಚರಿಸುತ್ತವೆ. ಚೀನದ ಚಹಕ್ಕಾಗಿ ಮತ್ತು ಈ ಸುತ್ತಿನ ಜನರಿಗೆ ತಮ್ಮ ರೇಷ್ಮೆ ಕಸೂತಿ ಚಿತ್ರಗಳು, ಬೆಣ್ಣೆ ಕಾಗದದ ಕೊಡೆಗಳು, ಲಿನೆನ್, ಕುಂಚ ಲೇಖನಿಗಳು, ಬೊಂಬಿನಲ್ಲಿ ಕಡೆದ ಚಿತ್ರಗಳು - ಇವುಗಳಿಗಾಗಿ ಚಾಂಗ್‍ಷಾ ಪ್ರಸಿದ್ಧ. ಅಕ್ಕಿಗಿರಣಿ, ಮರ ಕೊಯ್ಯುವುದು, ದೋಣಿ ರಚನೆ, ಆಂಟಿಮೊನಿ, ಮ್ಯಾಂಗನೀಸ್, ಸೀಸ ಮತ್ತು ಸತುಗಳನ್ನು ಕರಗಿಸುವುದು - ಇವು ಇಲ್ಲಿದ್ದ ಕೈಗಾರಿಕೆಗಳು. ಈ ಕೈಗಾರಿಕೆಗಳ ಸರಕುಗಳು ಬಹುತೇಕ ರಫ್ತಾಗುತ್ತಿದ್ದುವು. ಯಂತ್ರೋಪಕರಣ, ಗಣಿಗಾರಿಕೆ, ಕೃಷಿ ಸಲಕರಣೆ, ಔಷಧ, ರಸಗೊಬ್ಬರ ಮತ್ತು ರಬ್ಬರ್ ಉತ್ಪನ್ನಗಳ ಕೈಗಾರಿಕೆಗಳು ಈಚೆಗೆ ಆರಂಭವಾಗಿವೆ. ಚಾಂಗ್‍ಷಾದಿಂದ ಚೀನದ ಇತರ ಸ್ಥಳಗಳಿಗೆ ಭೂಜಲ ಸಂಪರ್ಕವುಂಟು. ಪೀಕಿಂಗ್, ಕ್ವಾಂಗ್‍ಜೋ (ಕ್ಯಾಂಟನ್), ಜಜಿಯಾಂಗ್, ಗ್ವೇಜೋಗಳಿಗೆ ರೈಲ್ವೆ ಮಾರ್ಗಗಳಿವೆ. ರಸ್ತೆಗಳ ಪೈಕಿ ಚಾಂಗ್‍ಷಾ-ಸಚ್ಚಾನ್ ಹೆದ್ದಾರಿ ಮುಖ್ಯವಾದ್ದು.

	ಚಾಂಗ್‍ಷಾ ಹಿಂದೆ ಚು ರಾಜ್ಯದ ರಾಜಧಾನಿಯಾಗಿತ್ತು. ಚು ರಾಜ್ಯ ಹ್ಯಾನ್ ಚಕ್ರಾಧಿಪತ್ಯದಲ್ಲಿ ವಿಲೀನವಾದ ಅನಂತರವೂ ಸ್ವತಂತ್ರ ರಾಜನೊಬ್ಬನಿಂದ ಆಳಲ್ಪಡುವ ಮಾನ್ಯತೆ ಪಡೆದಿತ್ತು. ಚಾಂಗ್‍ಷಾ ನಗರದ ಕೋಟೆಯ ಗೋಡೆಗಳ ಹೊರಭಾಗದಲ್ಲಿ ಕ್ರಿ.ಪೂ.3 ಮತ್ತು 2ನೆಯ ಶತಮಾನಗಳಿಗೆ ಸೇರಿದ ಕೆಲವು ಸಮಾಧಿಗಳಿವೆ. ಈ ಪ್ರದೇಶದ ಭೂಮಿಯ ತಂಪುಗುಣದಿಂದ ಮರ ಮತ್ತು ಅರಗಿನಿಂದ ಮಾಡಿದ ಅನೇಕ ವಸ್ತುಗಳು ನಾಶಗೊಳ್ಳದೆ ಉಳಿದುಕೊಂಡಿವೆ. ಈ ಸಮಾಧಿಗಳಲ್ಲಿ ದೊರಕಿದ ಅವಶೇಷಗಳು ಪರಸಂಸ್ಕøತಿಯೊಂದಕ್ಕೆ ಸಂಬಂಧಪಟ್ಟುವೆಂಬುದನ್ನು ಸೂಚಿಸುತ್ತವೆ. ಇದರ ಅನೇಕ ಅಂಶಗಳು ಸೈಬೀರಿಯ ಪ್ರದೇಶದ ಯೂರಲ್ ಅಲ್ಟಾರಿ ಜನಾಂಗದ ಪ್ರಾಚೀನ ಮತಪದ್ಧತಿಗಳನ್ನು ಹೋಲುತ್ತವೆ. ಈ ಅವಶೇಷಗಳಲ್ಲಿ ಮುಖ್ಯವಾದವೆಂದರೆ ಮರದ ಪ್ರತಿಮೆಗಳು. ಮಾನವನ ತಲೆ, ಉದ್ದ ನಾಲಗೆ ಮತ್ತು ಗುಡ್ಡೆಗಣ್ಣುಗಳಿರುವಂತೆ ಇವನ್ನು ಕಡೆಯಲಾಗಿದೆ. ಮೃತರ ಸಮಾಧಿಗಳಲ್ಲಿ ಸೇವಕರ ಪ್ರತಿಮೆಗಳೂ ಅರಗಿನ ವಸ್ತುಗಳೂ ಇದ್ದುವು. ಅರಗಿನ ವಸ್ತುಗಳು ಹ್ಯಾನ್ ಕಾರ್ಖಾನೆಗಳಲ್ಲಿ ಮಾಡಿದ್ದವೆಂದು ಊಹಿಸಲು ಆಧಾರಗಳುಂಟು. ಸಮಾಧಿಯೊಂದರಲ್ಲಿ ಅತ್ಯಂತ ಪ್ರಾಚೀನವಾದ ಬರೆಯುವ ಕುಂಚ ದೊರೆತಿದೆ.       (ಎಂ.ಎಸ್.ಎನ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ